ರಾಜ್ಯ ಪರಿಸರ, ಜೀವಿಶಾಸ್ತ್ರ, ಯೋಜನೆ ಮತ್ತು ಸಾಂಖ್ಯಿಕ ಸಚಿವರ ಜಿ.ಕೆ.ವಿ.ಕೆ. ಭೇಟಿ

ರಾಜ್ಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು, ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಹಲವಾರು ಸಭೆಗಳನ್ನು ಆಯೋಜಿಸಿರುವುದು ತಮಗೆಲ್ಲಾ ತಿಳಿದ ವಿಷಯವಾಗಿದೆ. ನಗರದಲ್ಲಿ ಕೊಳೆಯುವ ತ್ಯಾಜ್ಯಗಳನ್ನು ಬಳಸಿ, ವಿದ್ಯುತ್ ಉತ್ಪಾದನೆ ಮಾಡಬಹುದಾದ ಸಾಧ್ಯತೆಯನ್ನು ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಇಂದು, ದಿನಾಂಕ ೧೫/೦೯/೨೦೧೨ ರಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಕುಲಪತಿಗಳಾದ ಡಾ. ಕೆ. ನಾರಾಯಣಗೌಡರವರೊಂದಿಗೆ ವಾತಾವರಣದಲ್ಲಿ ಹೆಚ್ಚುತ್ತಿರುವ ತಾಪಮಾನ, ಮುಂಗಾರು ಕ್ಷೀಣತೆ, ಅಂತರ್ಜಲ ಕುಸಿತ, ಮತ್ತು ಪರಿಸರ ಸಂರಕ್ಷಣೆಯ ಕುರಿತು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.  ಈ ಸಂದರ್ಭದಲ್ಲಿ ಜಿ.ಕೆ.ವಿ.ಕೆ. ಆವರಣದಲ್ಲಿರುವ ಬಯೋಗ್ಯಾಸ್ ವಿದ್ಯುತ್ ಉತ್ಪಾದನ ಘಟಕವನ್ನು ಪರಿಶೀಲಿಸಲಾಯಿತು.

ಕೃಷಿ ವಿಶ್ವವಿದ್ಯಾಲಯವು ಅದರ ಆವರಣದಲ್ಲಿ ದೊರೆಯುವ ಸಗಣಿ, ಗಂಗಲ, ಆಹಾರ ತ್ಯಾಜ್ಯಗಳು ಮತ್ತು ಕೊಳೆಯುವ ವಸ್ತುಗಳಿಂದ ಬೆಂಗಳೂರು ಹಸಿರ ತಂತ್ರಜ್ಞಾನವಾದ ಬಯೋಗ್ಯಾಸ್ ಘಟಕದಿಂದ ವಿದ್ಯುತ್ ಉತ್ಪಾದನೆಯನ್ನು ಕಾರ್ಯಾರಂಭ ಮಾಡಿದ್ದು, ದೇಶದಲ್ಲಿಯೇ ಈ ತಂತ್ರಜ್ಞಾನ ಅಳವಡಿಸಿಕೊಂಡ ಪ್ರಪ್ರಥಮ ವಿಶ್ವವಿದ್ಯಾಲಯ ಇದಾಗಿದೆ.  ಈ ಘಟಕದಿಂದ ಪ್ರತಿದಿನ ೨೦೦ ಘನ ಮೀಟರ್ ಅನಿಲವನ್ನು ಉತ್ಪಾದನೆ ಮಾಡುತ್ತಿದ್ದು, ೩ ಟನ್‌ಗಳಷ್ಟು ಸಾವಯವ ಗೊಬ್ಬರವನ್ನು ಪಡೆಯುತ್ತಿದೆ. ವಿಶ್ವವಿದ್ಯಾಲಯದ ಸಂಶೋಧನೆಗೆ ಇದನ್ನು ಬಳಸಿಕೊಳ್ಳುತ್ತಿದ್ದು, ಬಯೋಗ್ಯಾಸ್ ಸ್ಲರಿಯ ಬಹುಪಯೋಗದ ಕುರಿತು ಸಂಶೋಧನೆಯನ್ನು ಹಮ್ಮಿಕೊಂಡಿದೆ. ಈ ಘಟಕದಿಂದ ಪ್ರತಿ ದಿನ ೩೨೦ ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಈ ವಿದ್ಯುತನ್ನು ಬೋರ್‌ವೆಲ್ ಪಂಪು, ಹಾಲು ಕರೆಯುವ ಯಂತ್ರ, ಕಟಾವು ಯಂತ್ರ, ಇತ್ಯಾದಿಗಳಿಗೆ ಉಪಯೋಗಿಸಲಾಗುತ್ತಿದ್ದು, ಇದರಿಂದ ಮಾಹೆಯಾನ ರೂ. ೫೦ ಸಾವಿರ ವಿದ್ಯುತ್ ಶುಲ್ಕವನ್ನು ಉಳಿತಾಯ ಮಾಡುತ್ತಿದೆ.

ದಿನೇ ದಿನೇ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ, ಬರಿದಾಗುತ್ತಿರುವ ಇಂಧನ ಮೂಲದಿಂದಾಗಿ ನಾವು ನವೀಕರಿಸುವ ಇಂಧನ ಮೂಲಗಳತ್ತ ಗಮನ ಹರಿಸುವುದು ಅಗತ್ಯವಾಗಿದೆ. ಬಯೋಗ್ಯಾಸ್ ಘಟಕವು ಪರಿಸರ ಸ್ನೇಹಿ, ಸ್ವಚ್ಚ ಅಭಿವೃದ್ಧಿಯ

ತಂತ್ರಜ್ಞಾನದಿಂದ ಕೂಡಿದ್ದು, ಹವಾಮಾನ ಬದಲಾವಣೆಯಂತಹ ದುಷ್ಪರಿಣಾಮಗಳನ್ನು ನೀಗಿಸಲು ಸಹಕಾರಿಯಾಗುವುದಲ್ಲದೆ,  ನಗರದ ಕೊಳೆಯುವ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಒಂದು ವರದಾನವಾಗಿದೆ. ಇದರಿಂದ ಸ್ಥಳೀಯವಾಗಿ ವಿದ್ಯುತ್ ಬೇಡಿಕೆಯನ್ನು ಅವಿರತವಾಗಿ ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.