Bangalore- ದಿವಂಗತ ದೇವರಾಜ್ ಅರಸ್ ರವರು ಅಪರೂಪದ ವ್ಯಕ್ತಿತ್ವ ಹೊಂದಿದ ರಾಜಕಾರಣಿ. ಅವರು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದರು. ರಾಜ್ಯ ರಾಜಕಾರಣ ಅಲ್ಲದೇ ರಾಷ್ಟ್ರಮಟ್ಟದಲ್ಲಿಯೂ ಕೂಡಾ ತಮ್ಮ ಛಾಪನ್ನು ಮೂಡಿಸಿದ ಒಬ್ಬ ಧೀಮಂತ ರಾಜಕಾರಣಿ ಮತ್ತು ಬಡವರ ಏಳಿಗೆಗಾಗಿ ಸಾಮಾಜಿಕ ಪರಿವರ್ತನೆಯನ್ನು ತಂದವರು.
ದಿವಂಗತ ಡಿ. ದೇವರಾಜ್ ಅರಸ್ ರವರು ಸಾಮಾಜಿಕ ಪರಿವರ್ತನೆ ಮುಖಾಂತರ ಸಾಂಪ್ರದಾಯಿಕ ಪದ್ಧತಿಗಳ ಆಚರಣೆಯಲ್ಲಿ ಬದಲಾವಣೆ ತರದೇ ಇದ್ದರೆ ರಾಜಕೀಯ ಮತ್ತು ಸಾಮಾಜಿಕವಾಗಿ ಬದಲಾವಣೆಗಳು/ಹೊಸತನವನ್ನು ತರಲಿಕ್ಕೆ ಸಾಧ್ಯವಿಲ್ಲ ಎಂಬ ಸಿದ್ಧಾಂತದಲ್ಲಿ ದೃಢವಾದ ನಂಬಿಕೆ ಇಟ್ಟವರು. ಆದ್ದರಿಂದ ಎಲ್ಲಾ ಸಮೂದಾಯಗಳನ್ನೊಳಗೊಂಡಂತಹ ಯುವಕರನ್ನು ಒಗ್ಗೂಡಿಸಿ, ಯುವ ಶಕ್ತಿಯನ್ನು ಕಟ್ಟಿದರು.
ಸಮಾಜದಲ್ಲಿ ಜೀವನೋಪಾಯಕ್ಕಾಗಿ ದುಡಿಯುವ ಮತ್ತು ದುಡಿಮೆಯೇತರ ವರ್ಗಗಳ ಮಧ್ಯೆ ಇರುವ ಅಂತರವನ್ನು ಹೋಗಲಾಡಿಸಬೇಕಾದರೆ ಜಾತಿ ಪದ್ಧತಿಯನ್ನು ಹೋಗಲಾಡಿಸಬೇಕು. ಆದ್ದರಿಂದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆಯನ್ನು ತಂದಂತಹ ಧೀಮಂತ ವ್ಯಕ್ತಿ.
ಉಳುವವನಿಗಾಗಿ ಭೂಮಿ ಕಾಯ್ದೆ ಜಾರಿಗೆ ತಂದು, ಜೀತ ಪದ್ಧತಿಯನ್ನು ನಿಲ್ಲಿಸಲು ನಾಂದಿ ಹಾಡಿದ ಮೊಟ್ಟಮೊದಲ ಮುಖ್ಯಮಂತ್ರಿ. ಇದರಿಂದ ಲಕ್ಷಾಂತರ ಭೂರಹಿತ ರೈತರಿಗೆ ಭೂಮಿಯನ್ನು ದೊರಕಿಸಿಕೊಟ್ಟು, ಸಾಮಾಜಿಕ ಮತ್ತು ಆರ್ಥಿಕವಾಗಿ ಸುಧಾರಣೆಯನ್ನು ತಂದರು.
ಇಂದು ನಾವು ಮಹಾನಗರ ಪಾಲಿಕೆಯಲ್ಲಿ ಅಂತಹ ಮಹಾನ್ ವ್ಯಕ್ತಿಯ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕುವುದರ ಮೂಲಕ ಸ್ಮರಿಸುತ್ತಿದ್ದೇವೆ ಎಂದು ಪೂಜ್ಯ ಮಹಾಪೌರರಾದ ಡಿ. ವೆಂಕಟೇಶ್ ಮೂರ್ತಿ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕರಾದ ಎನ್. ನಾಗರಾಜು, ಜೆಡಿಎಸ್ ಪಕ್ಷದ ನಾಯಕರಾದ ಟಿ. ತಿಮ್ಮೇಗೌಡರು ಹಾಗೂ ಪಾಲಿಕೆಯ ಸದಸ್ಯರಾದ ಸಂಪತ್ ಕುಮಾರ್ ರವರು ಹಾಜರಿದ್ದರು.













