ಬೆಂಗಳೂರು, ಆಗಸ್ಟ್-೦೬:- ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ್ ಅವರು ಇಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿ ವಿವಿಧ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಸಭಾ ಕ್ಷೆತ್ರದ ಚೋಳನಾಯ್ಕನಹಳ್ಳಿ ದೇವಸಂದ್ರ, ಗುಡ್ಡದಹಳ್ಳಿ, ಭುವನೇಶ್ವರಿ ನಗರ, ಸೀತಪ್ಪ ಲೇಔಟ್‌ನ ಚಾಮುಂಡಿನಗರ ಮುಖ್ಯರಸ್ತೆ ಮುಂತಾದ ಕಡೆಗಳಿಗೆ ಉಪಮುಖ್ಯಮಂತ್ರಿಗಳು ಭೇಟಿ ನೀಡಿದರು.
ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಉಪಮುಖ್ಯಮಂತ್ರಿಗಳ ಜೊತೆಗಿದ್ದು, ಕ್ಷೇತ್ರದಲ್ಲಾಗಿರುವ ಪ್ರಗತಿಯ ಬಗೆಗೆ ವಿವರಣೆ ನೀಡಿದರು.
ಭುವನೇಶ್ವರಿ ನಗರದ ದೊಡ್ಡ ಮೋರಿ ಪರಿಶೀಲಿಸಿದ ಉಪಮುಖ್ಯಮಂತ್ರಿಗಳು, ಪ್ರಸ್ತುತ ಮಳೆಗಾಲವಾದ್ದರಿಂದ ಮೋರಿ ಕಾಮಗಾರಿಯನ್ನು ಕೈಗೆತ್ತಿಕೊಂಡು ತುರ್ತಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ತುರ್ತಾಗಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.













