ಅಲ್ಪಸಂಖ್ಯಾತರ ಶಿಕ್ಷಣ ಸುಧಾರಣೆ: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಸಾಂಗ್ಲಿಯಾನ ಮೆಚ್ಚುಗೆ

ಬೆಂಗಳೂರು, ಸೆ. ೮ – ಅಲ್ಪಸಂಖ್ಯಾತರ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ಅತ್ಯುತ್ತಮ ಪ್ರಗತಿ ಸಾಧಿಸಿದ್ದು, ಈ ಬಗ್ಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಶ್ರೀ ಎಚ್.ಟಿ. ಸಾಂಗ್ಲಿಯಾನ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ ಪ್ರಧಾನ ಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ರಾಜ್ಯದ ಪ್ರತಿ ಇಲಾಖೆಯ ಯೋಜನಾ ಕಾರ್ಯಕ್ರಮಗಳಲ್ಲಿ ಶೇ. ೧೫ರಷ್ಟು ಆಚಿiವ್ಯಯವನ್ಮ್ನ ಅಲ್ಪ[ಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಮೀಸಲಿಡಬೇಕು. ಈ ಬಗ್ಗೆ ಅಧಿಕಾರಿಗಳು ಸಮುದಾಯವಾರು ವರದಿಯನ್ನು ಸಲ್ಲಿಸಬೇಕು ಎಂದು ಶುಕ್ರವಾರ ನಡೆದ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ದೂರು, ಸಲಹೆಗಳೇನಾದರೂ ಇದ್ದಲ್ಲಿ  ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ಅಥವಾ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಗಮನಕ್ಕೆ ತರಬಹುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಅಂಗನವಾಡಿಗಳಿಗೆ ಶೌಚಾಲಯ, ಮೂಲಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ವಿವಿಧ ಸಮುದಾಯಗಳ ಜನರು ಸೌಹಾರ್ದಯುತವಾಗಿ ಬಾಳುವಂತಾಗಬೇಕು. ಜನರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ ಅವರು, ಜನರು ಶಾಂತಿಯಿಂದ ಸಹಬಾಳ್ವೆ ನಡೆಸುವ ಮಹತ್ವವನ್ನು ನಾವು ಈಶಾನ್ಯ ರಾಜ್ಯಗಳ ಜನರ ವಲಸೆ ಪ್ರಕರಣದಿಂದ ಅರಿತಿದ್ದೇವೆ ಎಂದು ತಿಳಿಸಿದರು.

ಯಾವುದೇ ವಿದ್ಯಾರ್ಥಿ ಸಂಘಟನೆಗಳು ಏನೇ ಸಮಸ್ಯೆ ಇದ್ದರೂ, ಕಾನೂನುಬದ್ಧವಾಗಿ ಪರಿಹರಿಸಿಕೊಳ್ಳಲು ಯತ್ನಿಸಬೇಕೇ ಹೊರತು, ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇದರಿಂದ ವಿದ್ಯಾರ್ಥಿ ಮುಖಂಡರ ಉಜ್ವಲ ಭವಿಷ್ಯ ಮಸುಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಶ್ರೀ ಅತೀಕ್ ಅಹ್ಮದ್ ಅವರು ಉಪಸ್ಥಿತರಿದ್ದರು.